ಕಡೆಯುವುದು : ಅಚಲವಾಗಿರುವ ಆಯುಧದ (ಟೂಲ್) ಕರ್ತನಧಾರ (ಕಟಿಂಗ್ ಎಡ್ಜ್‌) ತಿರುಗುತ್ತಿರುವ ಒಂದು ವಸ್ತುವಿನ ಮೇಲೆ ಒತ್ತಡ ಹೇರಿದಾಗ ನಡೆಯುವ ಕ್ರಿಯೆ (ಟರ್ನಿಂಗ್). ಆದರೆ ತಿರುಗುತ್ತಿರುವ ಅನೇಕ ಆಯುಧಗಳ ಮೂಲಕ ತಿರುಗದೆ ಇರುವ ವೃತ್ತ್ತಾಕಾರದ ದಂಡವನ್ನೊಯ್ದು ನಡೆಸುವ ಅಕೇಂದ್ರಕ ಕಡೆಯುವಿಕೆ ಇದಕ್ಕೆ ಅಪವಾದವಾಗಿದೆ. ಕಡೆಯುವುದನ್ನು ಕಡೆಯುವ ಯಂತ್ರದ ನೆರವಿನಿಂದ ಒಂದು ವಸ್ತುವಿನ ಪ್ರಯಾಸವನ್ನು ತಗ್ಗಿಸುವ ಕ್ರಿಯೆ ಎಂದು ಸಹ ಹೇಳಬಹುದು. ಸಂರೂಪಣ (ಶೇಪಿಂಗ್), ಭ್ರಮಿಕರ್ತನ (ಮಿಲ್ಲಿಂಗ್) ಬೈರಿಗೆ ಕ್ರಿಯೆ (ಡ್ರಿಲ್ಲಿಂಗ್) ಮುಂತಾದವು ಗಳಲ್ಲಿ ಚಲನೆ ಆವಶ್ಯಕ. ಸಮತಲನದಲ್ಲಿ (ಪ್ಲೇನಿಂಗ್) ಪರಿಭ್ರಮಣ ಚಲನೆಯಿಲ್ಲ. ಕಾಯಕ ವಸ್ತುವಿನ ಪರಿಭ್ರಮಣೆ ಕಡೆಯುವುದರಲ್ಲಿ ಮಾತ್ರ  ಸಾಧ್ಯ. ಕಡೆಯುವುದು ಸಾಮಾನ್ಯವಾಗಿ ದಂಡ, ಕುಟ್ಟುವಸ್ತು (ಫೋರ್ಜಿಂಗ್ಸ್‌) ಅಥವಾ ಎರಕಗಳ ಹೊರವ್ಯಾಸದಲ್ಲಿ ನಡೆಸುವ ಕ್ರಿಯೆಯನ್ನು ಸೂಚಿಸುತ್ತದೆ. ಕಡೆಯಲು ಮುಖ್ಯವಾಗಿ ಕಾಯಕ ವಸ್ತುವನ್ನು ತಿರುಗಿಸಬಲ್ಲ ಮತ್ತು ಇದರ ಉದ್ದ ಹಾಗೂ ಅಡ್ಡಕ್ಕೆ ಚಲಿಸಬಲ್ಲ ಆಯುಧವನ್ನುಳ್ಳ ಸಾಧನಗಳು ಬೇಕು. ಕಡೆಯುವ ಕ್ರಿಯೆಯನ್ನು ನಡೆಸಲು ಕಾಯಕವಸ್ತುವಿನ ಕೊನೆಗಳೆರಡನ್ನೂ ಕೊರೆದು ಅವನ್ನು ಚಲ ಮತ್ತು ಅಚಲ ಕೇಂದ್ರಗಳೆಂಬ ಕಡೆಯುವ ಯಂತ್ರದ ಶಂಕ್ವಾಕೃತಿಯ ಭಾಗಗಳಿಗೆ ಜೋಡಿಸಬೇಕು. ವಿದ್ಯುತ್ ಮೋಟಾರಿನಿಂದ ಚಲಕೇಂದ್ರವನ್ನು ತಿರುಗಿಸಿದಾಗ ಅದಕ್ಕಂಟಿರುವ ಗ್ರಾಹಕತಟ್ಟೆ (ಕ್ಯಾಚ್ ಪ್ಲೇಟ್) ಸಹ ತಿರುಗಿ ಅದರ ಸಂಪರ್ಕಕ್ಕೆ ಬರುವ ವಾಹನವನ್ನೂ ತಿರುಗಿಸುತ್ತದೆ. ಈ ಯಂತ್ರಕ್ಕೆ ಜೋಡಿಸಿರುವ ಮೆಟ್ಟಲ ರಾಟೆಗಳು ಮತ್ತು ಜವ ತಗ್ಗಿಸುವ ಹಲ್ಲಿನ ಚಕ್ರಗಳಿಂದ (ಬ್ಯಾಕ್ ಗೇರ್ಸ್‌) ಕಾಯಕವಸ್ತುವನ್ನು ಇಚ್ಛಿತ ಜವದಲ್ಲಿ ತಿರುಗಿಸಬಹುದು. ಕಾಯಕವಸ್ತು ಬಹಳ ಉದ್ದವಾಗಿದ್ದರೆ ಆಯುಧದ ಒತ್ತಡ ಬಿದ್ದಾಗ ಬಗ್ಗುತ್ತದೆ. ಇದನ್ನು ತಪ್ಪಿಸಲು ಅಪರಿವರ್ತಿ ಆಧಾರವನ್ನು (ಸ್ಟೆಡಿ ರೆಸ್ಟ್‌) ಉಪಯೋಗಿಸಬೇಕು. ಇವುಗಳ ಬದಲು ಚಕ್ ಎಂಬ ಸಾಧನವನ್ನು ಉಪಯೋಗಿಸಿದರೆ ವಾಹಕ, ಅಚಲಕೇಂದ್ರಕ ಮುಂತಾದುವನ್ನು ಕೈಬಿಡಬಹುದು. ಕಡೆಯುವ ಯಂತ್ರದಲ್ಲಿ ಕಾಯಕವಸ್ತುವಿನ ಉದ್ದ ಮತ್ತು ಅಡ್ಡಕ್ಕೆ ಚಲಿಸಬಲ್ಲ ಆಯುಧ ಸ್ತಂಭವೆಂಬ (ಟೂಲ್ ಪೋಸ್ಟ್‌) ವ್ಯವಸ್ಥೆ ಇದೆ. ಇದರಲ್ಲಿ ಜೋಡಿಸಿರುವ ಆಯುಧವನ್ನು ಇಚ್ಛಿಸಿದ ಯಾವುದೇ ಕೋನಕ್ಕಾದರೂ ತಿರುಗಿಸಬಹುದು. ಕಾಯಕವಸ್ತುವನ್ನು ಕಡೆಯಬೇಕಾದರೆ ಆಯುಧ ಅದಕ್ಕಿಂತ ಗಟ್ಟಿ ಹಾಗೂ ದೃಢವಾಗಿ ಇರಬೇಕು. ಆದ್ದರಿಂದ ಆಯುಧವನ್ನು ವಿಶೇಷ ಉಕ್ಕುಗಳಿಂದ ತಯಾರಿಸುತ್ತಾರೆ. ಕಂಪನಗಳು ಮತ್ತು ಆಯುಧಸ್ತಂಭದ ಜಾರುವಿಕೆ ಇಲ್ಲದೆ ಆಯುಧದ ಕರ್ತನ ಕೋನಗಳೂ ಸರಿಯಾಗಿದ್ದರೆ ಅಧಿಕೋಷ್ಣತೆಯ ಉತ್ಪತ್ತಿಯನ್ನು ತಡೆಯಲು ಹಾಗೂ ಕಡೆಯುವುದರ ದಕ್ಷತೆಯನ್ನು ಹೆಚ್ಚಿಸಲು ಕೀಲೆಣ್ಣೆಯನ್ನು ಉಪಯೋಗಿಸುತ್ತಾರೆ. ಕೆಲವೊಮ್ಮೆ ವಸ್ತುಗಳ ಸಂವಾಟವು ಬೇಕಾಗುತ್ತದೆ. ಇದನ್ನು ಬಹುಪದತಾಣವೆಂಬ (ಕಾಂಪೌಂಡ್ ರೆಸ್ಟ್‌) ಸಾಧನವನ್ನು ಬೇಕಾದ ಕೋನಕ್ಕೆ ತಿರುಗಿಸಿ ಕಡೆಯುವುದರಿಂದ ಅಥವಾ  ಅಚಲಕೇಂದ್ರಕವನ್ನು ಸ್ವಲ್ಪ ಪಕ್ಕಕ್ಕೆ ಜರುಗಿಸಿ ಕಡೆಯುವುದರಿಂದ ಅಥವಾ ರೂಪಿಸುವ ಆಯುಧದ ಉಪಯೋಗದಿಂದ ಅಥವಾ ಸಂವಾಟಕ್ಕೆಂದೇ ಇರುವ ಪ್ರತ್ಯೇಕವಾದ ಜೋಡಣೆಯಿಂದ ಪಡೆಯಬಹುದು.                  	(ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ